Eco-Tourism
ಪರಿಸರ ಪ್ರವಾಸೋದ್ಯಮ

ಪರಿಸರ ಪ್ರವಾಸೋದ್ಯಮವು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಮುಖ ಅಂಶವಾಗಿ ಹೊರಹೊಮ್ಮುತ್ತಿದೆ. ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿ ವಾಸಿಸುವ ಸ್ಥಳೀಯ, ಅತಿಥೇಯ ಸಮುದಾಯಗಳ ಜೀವನಮಟ್ಟವನ್ನು ಸುಧಾರಿಸಲು ಸುಸ್ಥಿರ, ನ್ಯಾಯಸಮ್ಮತ ಸಮುದಾಯ ಆಧಾರಿತ ಪ್ರಯತ್ನವನ್ನು ಹೊಂದಿರುವ “ಸಾಮೂಹಿಕ ಪ್ರವಾಸೋದ್ಯಮಕ್ಕಿಂತ” ಸ್ಪಷ್ಟವಾಗಿ ಭಿನ್ನವಾಗಿರುತ್ತದೆ.


ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 02 ಪ್ರವಾಸೋದ್ಯಮ ಕೇಂದ್ರಗಳಿದ್ದು, ಅದರಲ್ಲಿ ನಾಗರಹೊಳೆ ಪ್ರವಾಸೋದ್ಯಮ ಕೇಂದ್ರ ಮತ್ತು ಸುಂಕದಕಟ್ಟೆ ಪ್ರವಾಸೋದ್ಯಮ ಕೇಂದ್ರವೆಂದು ವಿಂಗಡಿಸಲಾಗಿದೆ. ನಾಗರಹೊಳೆ ಪ್ರವಾಸೋದ್ಯಮ ವಲಯವು 2 ಗಸ್ತಿನ ಅರಣ್ಯ ಪ್ರದೇಶವನ್ನು ಹೊಂದಿದ್ದು, 12.40 ಚ.ಕಿ.ಮೀ. ವ್ಯಾಪ್ತಿಯಲ್ಲಿರುತ್ತದೆ. ಸುಂಕದಕಟ್ಟೆ ಪ್ರವಾಸೋದ್ಯಮ ವಲಯವು ಅಂತರಸಂತೆ ವನ್ಯಜೀವಿ ವಲಯದಲ್ಲಿ 6 ಗಸ್ತುಗಳನ್ನು ಹೊಂದಿದ್ದು 50.50 ಚ.ಕಿ.ಮೀ. ವ್ಯಾಪ್ತಿಯನ್ನು ಹೊಂದಿರುತ್ತದೆ. ಒಟ್ಟಾರೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪ್ರವಾಸೋದ್ಯಮ ವಲಯವು ಒಟ್ಟು 62.90 ಚ.ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ.

Project Tiger
ಹುಲಿ ಯೋಜನೆ

ಭಾರತ ಸರ್ಕಾರವು ರಾಷ್ಟ್ರೀಯ ಪ್ರಾಣಿಯಾದ ಹುಲಿಗಳನ್ನು ಸಂರಕ್ಷಿಸಲು ಮುಂಜಾಗೃತ ಯೋಜನೆಯಾದ ಹುಲಿ ಯೋಜನೆಯನ್ನು 1973ರಲ್ಲಿ ಜಾರಿಗೆ ತರಲಾಯಿತು. ಈ ಮೊದಲು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಭಾಗವಾಗಿದ್ದ ನಾಗರಹೊಳೆಯನ್ನು ಹುಲಿ ಯೋಜನೆಯಡಿಯಲ್ಲಿ 9 ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಂದಾಗಿ ಪರಿಗಣಿಸಲಾಯಿತು.


ಹುಲಿ ಸಂರಕ್ಷಣೆ ಯೋಜನೆ ಆಧಾರದ ಮೇಲೆ 2007ರಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವನ್ನು ಸ್ವತಂತ್ರ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು. ಪ್ರಸ್ತುತ ನಾಗರಹೊಳೆಯು ಕೋರ್ / ಬಫರ್ ಪ್ರದೇಶವಾಗಿ ರಚಿತವಾಗಿದ್ದು, ಕೋರ್ ಪ್ರದೇಶವು ರಾಷ್ಟ್ರೀಯ ಉದ್ಯಾನವನದ ಸ್ಥಾನಮಾನವನ್ನು ಹೊಂದಿದೆ. ಬಫರ್ ಪ್ರದೇಶವು ರಕ್ಷಿತ ಅರಣ್ಯ ಪ್ರದೇಶವಾಗಿರುತ್ತದೆ.

Tribal Rehabilitation
ಬುಡಕಟ್ಟು ಜನರ ಪುನರ್ವಸತಿ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ಹಲವು ಬುಡಕಟ್ಟು ಜನಾಂಗಗಳಾದ ಜೇನುಕುರುಬ, ಬೆಟ್ಟ ಕುರುಬ,ಸೋಲಿಗ,ಎರವ ಸಮುದಾಯಗಳಿಗೆ ಸೇರಿದ ಆದಿವಾಸಿಗಳು ಹಾಡಿಗಳಲ್ಲಿ ವಾಸವಾಗಿದ್ದು, 1703 ಕುಟುಂಬಗಳು 6579 ಜನರನ್ನುಒಳಗೊಂಡಿರುವ 45 ಬುಡಕಟ್ಟು ಹಾಡಿಗಳಿಗೆ ನೆಲೆಯಾಗಿದೆ.​ ಶತ-ಶತಮಾನಗಳಿಂದ ಕಾಡಿನಲ್ಲಿಯೇ ವಾಸಿಸುತ್ತಾ ಬಂದಿರುವ ಬುಡಕಟ್ಟು ಜನಾಂಗದವರನ್ನು ಆರ್ಥಿಕವಾಗಿ ಶೈಕ್ಷಣಿಕವಾಗಿ ಆಧುನಿಕತೆಗೆ ಹೊಂದಿಕೊಳ್ಳಬೇಕಾಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪುನರ್ವಸತಿ ಯೋಜನೆಗಳನ್ನು ಜಾರಿಗೆ ತಂದಿರುತ್ತಾರೆ.


ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಾಸವಿದ್ದ ಗಿರಿಜನರು ಸ್ವಯಂ ಪ್ರೇರಿತರಾಗಿ ನಾಗಾಪುರ, ಶೆಟ್ಟಳ್ಳಿ –ಲಕ್ಕಪಟ್ಟಣ, ಸೊಳ್ಳೆಪುರ ಹಾಗೂ ಮಾಸ್ತಿಗುಡಿ ಗಿರಿಜನ ಪುನರ್ವಸತಿ ಪ್ರದೇಶಕ್ಕೆ ಪುನರ್ವಸತಿಗೊಂಡಿರುತ್ತಾರೆ. ಸದರಿ ಪುನರ್ವಸತಿ ಯೋಜನೆಗಳು ಉತ್ತಮ ಹಾಗೂ ಮಾದರಿ ಪುನರ್ವಸತಿ ಕೇಂದ್ರಗಳೆಂದು ಹೆಸರು ಪಡೆದಿದೆ.