ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು 125 ಹುಲಿಗಳನ್ನು ಹೊಂದಿದ್ದು, ಅತಿ ಹೆಚ್ಚಿನ ಹುಲಿ ಸಾಂದ್ರತೆಯನ್ನು ಹೊಂದಿರುವ ಪ್ರದೇಶವಾಗಿದೆ. ಇತ್ತೀಚಿನ NTCA ವರದಿ ಪ್ರಕಾರ ಸಾಂದ್ರತೆಯು ಪ್ರತಿ 100 ಚ.ಕಿ.ಮೀ.ಗೆ 11.82 ಎಂದು ಗುರುತಿಸಲಾಗಿದೆ. ಈ ಪ್ರದೇಶವು ಕರ್ನಾಟಕ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ನೀಲಗಿರಿ ಜೀವಗೋಳ (5520 ಚ.ಕಿ.ಮೀ) ರಕ್ಷಿತ ಪ್ರದೇಶದ ಹೃದಯ ಭಾಗವಾಗಿದ್ದು, ನೀಲಗಿರಿ ಜೀವಗೋಳವು ವಿಶ್ವದ ಅತ್ಯಂತ ಪ್ರಾಚೀನ ಮತ್ತು ಅತೀದೊಡ್ಡ ಜೀವವೈವಿಧ್ಯತೆ ಸಂರಕ್ಷಣಾ ಪ್ರದೇಶದಲ್ಲಿ ಒಂದಾಗಿದೆ.
ನೀಲಗಿರಿ ಜೀವಗೋಳವು ಪಶ್ಚಿಮಘಟ್ಟ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಇದು ಬಂಡೀಪುರ, ವೈನಾಡು, ಮಧುಮಲೈ, ಸತ್ಯಮಂಗಲ, ಬಿ.ಆರ್.ಟಿ ಪ್ರದೇಶದಲ್ಲಿ ಹರಡಿದೆ. ಈ ಜೀವಗೋಳವು ಕರ್ನಾಟಕ, ಕೇರಳ, ತಮಿಳುನಾಡು ಸೇರಿದೆಂತೆ 03 ರಾಜ್ಯಗಳಲ್ಲಿ ವ್ಯಾಪಿಸಿದೆ. ಈ ಸಂರಕ್ಷಣಾ ಪ್ರದೇಶವು 724 (12.134 ಚ.ಕಿ.ಮೀ) ಹುಲಿಗಳನ್ನು ಹೊಂದಿದ್ದು, ದೇಶದಲ್ಲಿಅತ್ಯಧಿಕ ಹುಲಿ, ಆನೆಗಳಿಗೆ ಆಶ್ರಯ ತಾಣವಾಗಿದೆ. ದೇಶದಲ್ಲಿರುವ ಅಳಿವಿನಂಚಿನ ಜೀವಿಗಳಲ್ಲಿ ಅತ್ಯಧಿಕ ಜೀವಿಗಳು ಇಲ್ಲಿ ಕಂಡುಬರುತ್ತವೆ. ಕಬಿನಿ ನದಿಯು ಕರುನಾಡಿನ ಹೆಮ್ಮೆಯ 02 ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ ಹಾಗೂ ನಾಗರಹೊಳೆಯನ್ನು ಪ್ರತ್ಯೇಕಿಸುತ್ತದೆ. ಕಬಿನಿ ಹಿನ್ನೀರು ಭಾಗ ಏಷ್ಯಾದಲ್ಲಿಯೇ ಅತೀ ದೊಡ್ಡ ಆನೆಗಳ ಗುಂಪು ಸೇರುವ ಸ್ಥಳವಾಗಿದೆ. ಈ ನದಿಯ ಸುತ್ತ-ಮುತ್ತ ಫಲವತ್ತಾದ ಹಳ್ಳಗಳು, ಹಡ್ಲು ಪ್ರದೇಶಗಳು ಇದ್ದು ಪ್ರತಿ ಬೇಸಿಗೆಯಲ್ಲಿ 600-800 ಆನೆಗಳಿಗೆ ಮತ್ತು ಎಲ್ಲಾ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿ ರೂಪುಗೊಂಡಿದೆ.
ಪಶ್ಚಿಮ ಘಟ್ಟ ಮತ್ತು ದಖ್ಖನ್ ಪ್ರಸ್ಥಭೂಮಿಯ ಮಧ್ಯ ಭಾಗದಲ್ಲಿರುವ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವು ದೇಶಿಯ, ವಿದೇಶಿ ಪಕ್ಷಿ ಸಂಕುಲಗಳಿಗೆ ಆಶ್ರಯ ತಾಣವಾಗಿರಿವುದಲ್ಲದೇ ವೈವಿಧ್ಯಮಯ ಅರೆನಿತ್ಯದ್ವರ್ಣ, ತೇವಾಂಶವುಳ್ಳ, ಒಣ ತೇವಾಂಶವುಳ್ಳ ಹಾಗೂ ಕುರುಚಲು ಅರಣ್ಯ ಪ್ರದೇಶವನ್ನು ಒಳಗೊಂಡಿದೆ. ತಾರಕ ಮತ್ತು ಕಬಿನಿ ಹಿನ್ನೀರಿನ ಪ್ರದೇಶಗಳು ಅಳಿವಿನಂಚಿನ ಪಕ್ಷಿ ಸಂಕುಲಗಳಿಗೆ ನೆಲೆಯಾಗಿದ್ದು, ದಕ್ಷಿಣ ಭಾರತದ ಪ್ರಸಿದ್ಧ ಪಕ್ಷಿ ಕೇಂದ್ರವಾಗಿದೆ.
ಭೌಗೋಳಿಕವಾಗಿ ನಾಗರಹೊಳೆ ದೇಶದಲ್ಲಿ ವಿಶಿಷ್ಟ ಜೀವವೈವಿಧ್ಯ ಪ್ರದೇಶಗಳಲ್ಲಿಒಂದಾಗಿದ್ದು, ನೈರುತ್ಯದಲ್ಲಿ ವಯನಾಡು ಅಭಯಾರಣ್ಯ, ಕಿರಿದಾದ ಗಿರಿ ಶ್ರೇಣಿಗಳಿಂದ ಕೂಡಿದ ಬ್ರಹ್ಮಗಿರಿ ಅಭಯಾರಣ್ಯಗಳ್ಳಿದ್ದು ಹಾಗೂ ಈ ಸಂರಕ್ಷಿತ ಪ್ರದೇಶದ ಸುತ್ತಮುತ್ತ ಪ್ರದೇಶಗಳಲ್ಲಿ ಪಶ್ಚಿಮ ಘಟ್ಟದ ಬೆಟ್ಟಗಳು, ಕಾಫಿತೋಟಗಳು ಹಾಗೂ ವಾಣಿಜ್ಯ ಬೆಳೆಗಳ ಪ್ರದೇಶಗಳು ಕಂಡು ಬರುತ್ತವೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವನ್ನು ಪ್ರಮುಖ ನದಿಗಳಾದ ಕಬಿನಿ, ತಾರಕ, ಸಾರಥಿ, ನಾಗರಹೊಳೆ, ಲಕ್ಷ್ಮಣ ತೀರ್ಥ ವಿಂಗಡಿಸಿದೆ. ಈ ನದಿಗಳು ಅಂತಿಮವಾಗಿ ಕಾವೇರಿ ನದಿಯನ್ನು ಸೇರುತ್ತವೆ. ಈ ನದಿಗಳ ನೀರನ್ನು ಕರ್ನಾಟಕ, ತಮಿಳುನಾಡಿನ ಇತರೆ ಜಿಲ್ಲೆಗಳಿಗೆ ನೀರಾವರಿಗೆ ಬಳಸಲಾಗುತ್ತದೆ. ಈ ನದಿಗಳು ರೈತರ ಆರ್ಥಿಕ ಅಭಿವೃದ್ಧಿಗೆ ಬೆನ್ನೆಲುಬಾಗಿದೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದೇವಮಾಚಿ, ಅರಕೆರೆ, ಮಾವುಕಲ್ ಹತ್ಫಾಟ್, ನಾಲ್ಕೇರಿ ಅರಣ್ಯ ಪ್ರದೇಶಗಳ ಸಮತಟ್ಟಾದ ಮೈದಾನವನ್ನು ಹಾಗೂ ಜೌಗು ಪ್ರದೇಶಗಳನ್ನು ಹೊಂದಿದ್ದು, ಇವುಗಳನ್ನು ಸ್ಥಳೀಯವಾಗಿ ಹಡ್ಲುಗಳೆಂದು ಕರೆಯಲಾಗುತ್ತದೆ. ಕಾರೆ, ಮುತ್ತುಗ, ಮತ್ತಿ, ಚೊಟ್ಟಿ, ಇನ್ನೂ ಮುಂತಾದ ಸಸ್ಯಪ್ರಭೇದಗಳು ಜೌಗು ಪ್ರದೇಶ ಹಾಗೂ ಹುಲ್ಲುಗಾವಲು ಪ್ರದೇಶಗಳಲ್ಲಿ ಕಾಣಸಿಗುತ್ತವೆ.
ಸುಮಾರು 30 ಹೆಕ್ಟೇರ್ ಪ್ರದೇಶದ ನಿತ್ಯ ಹರಿದ್ವರ್ಣ ಕಾಡಿನ ಭಾಗವು ಕೊಡಗು ಜಿಲ್ಲೆಯ ಮಾವುಕಲ್ ರಾಜ್ಯ ಅರಣ್ಯದಲ್ಲಿ ಮತ್ತು ಭಾಗಶಃ ಮೈಸೂರು ಜಿಲ್ಲೆಯ ಆನೆಚೌಕೂರು ರಾಜ್ಯ ಅರಣ್ಯದಲ್ಲಿದೆ. ಇದನ್ನು ಸ್ಥಳೀಯವಾಗಿ ಸೀತಾವನ ಅಥವಾ ಸೀತಾತೋಪು ಎಂದು ಕರೆಯುತ್ತಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕರು
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಫಾರೆಸ್ಟ್ ಕ್ಯಾಂಪಸ್,
ಹಳೇ ಬಿ.ಎಂ ರಸ್ತೆ, ಹುಣಸೂರು - 571105
Ph: 08222-252041
Email – dirnagarahole@aranya.gov.in
© ಕೃತಿಸ್ವಾಮ್ಯ 2021 ಎಲ್ಲ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ,ಕರ್ನಾಟಕ ಅರಣ್ಯ ಇಲಾಖೆ,ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದವರು Pace Wisdom.